ಇಳಿಗಾಲುವೆ-
ಮರ, ಕಲ್ಲು, ಆಹಾರಧಾನ್ಯಗಳು, ಕಲ್ಲಿದ್ದಲು ಇತ್ಯಾದಿ ತೂಕವಾದ ಸಾಮಗ್ರಿಗಳನ್ನು ಮೇಲಿನ ಮಟ್ಟದಿಂದ ಕೆಳಕ್ಕೆ ಇಳಿಜಾರಿನಲ್ಲಿ ತಳ್ಳುವ ನೈಸರ್ಗಿಕ ಇಲ್ಲವೆ ಕೃತಕವಾದ ತೊಟ್ಟಿ. ನಾಲೆ ಇಲ್ಲವೆ ಕಂಬಿ ಸಾಲು (ಷೂಟ್). ಹೊಳೆಗಳಿಗೆ ಅಡ್ಡಲಾಗಿ ಕಲ್ಲುಗಾರೆಯ ಕಟ್ಟೆಯನ್ನು ಕಟ್ಟುವಾಗ ಭರ್ತಿಕಲ್ಲನ್ನು (ರಬ್ಬಲ್ ಸ್ಟೋನ್) ಕಡಿದಾಗ ಗುಡ್ಡದ ನೆತ್ತಿಯಿಂದ ತಪ್ಪಲಿನಲ್ಲಿ ರಸ್ತೆಯನ್ನು ಮಾಡಿ ಸಾಗಿಸುವುದು ಕೆಲವು ವೇಳೆ ಸಾಧ್ಯವಾಗಲಾರದು. ಅಂಥ ಕಡೆಗಳಲ್ಲಿ ಹಳೆಯ ರೈಲ್ವೆ ಕಂಬಿಗಳನ್ನು ಒಂದರ ಪಕ್ಕದಲ್ಲೊಂದರಂತೆ ಇಳಿಕಲ್ಲಿನಲ್ಲಿ ಭದ್ರಮಾಡಿ ಮೇಲಿನಿಂದ ಕಲ್ಲುಗಳನ್ನು ಕೆಳಕ್ಕೆ ಉರುಳಿಸಿ ಅಲ್ಲಿಂದ ಗಾಡಿಗಳ ಮೇಲೆಯೋ ಲಾರಿಗಳ ಮೇಲೆಯೋ ಕಟ್ಟೆಯನ್ನು ಕಟ್ಟುವ ಜಾಗಕ್ಕೆ ಸಾಗಿಸಬಹುದು. ಕಾಂಕ್ರೀಟಿನ ಮೇಲಿನಿಂದ ನದಿಯಲ್ಲಿ ತೇಲಿಬಂದ ಮರಗಳನ್ನು ಕಟ್ಟೆಯ ಹಿಂದಿನ ಮುಖದಲ್ಲಿ ಕೊರೆದ ಕಾಲುವೆಯ ಮೂಲಕ ತಿರುಗಿ ಕೆಳಕ್ಕೆ ತಳ್ಳುತ್ತಾರೆ. ನೀರಿನ ಇಳಿಗಾಲುವೆ ಮರದಿಂದ ಮಾಡಿದ ಕಡಿದಾದ ಇಳಿಕಲು. ಇದರ ತಳದಲ್ಲಿ ಹೆಚ್ಚು ಆಳವಿಲ್ಲದ ಕೊಳವಿರುತ್ತದೆ. ಇದರ ಮೇಲೆ ಕ್ರೀಡಾರ್ಥವಾಗಿ ಚಪ್ಪಟೆಯಾದ ತಳವುಳ್ಳ ದೋಣಿಗಳನ್ನು ಇಳಿಸುತ್ತಾರೆ.
(ಎಚ್.ಸಿ.ಕೆ.)
(ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ